ಧ್ರುವ 4 -
ಭಾರತದಲ್ಲಾಳಿದ ಈ ಹೆಸರಿನ ಅನೇಕ ರಾಜರ ಪೈಕಿ ಅತ್ಯಂತ ಪ್ರಾಚೀನನಾದವನು ಲಾಟಮಂಡಲದಲ್ಲಿ (ಗುಜರಾತ್) ಆಳುತ್ತಿದ್ದ ರಾಷ್ಟ್ರಕೂಟ ಶಾಖೆಯ ಅರಸ. ಇವನ ಕಾಲ ಸು. 725. ಇವನ ಮೊಮ್ಮೊಗನಾದ ಮಹಾರಾಜಾಧಿರಾಜ ಕಕ್ಕರಾಜನ 757 ಶಾಸನಗಳಲ್ಲಿ ಇವನು ಉಕ್ತನಾಗಿದ್ದಾನೆ. ಇವನ ವಿಷಯವಾಗಿ ಇತರ ಬೇರೆ ಯಾವ ಅಂಶಗಳು ತಿಳಿದಿಲ್ಲ.

ಮಾನ್ಯಖೇಟ ರಾಷ್ಟ್ರಕೂಟ ಶಾಖೆಯ ಮಹಾರಾಜಾಧಿರಾಜ ಧ್ರುವರಾಜ ಮೇಲೆ ಹೇಳಿದ ಲಾಟಶಾಖೆಯ ಧ್ರುವನಿಗಿಂತ ಈಚಿನವ. ಈ ಹೆಸರಿನ ರಾಜರೆಲ್ಲ ಅತ್ಯಂತ ಪ್ರಖ್ಯಾತನಾದವ. ಇವನಿಗೆ ಧಾರಾವರ್ಷ, ನಿರುಪಮ, ಕಲಿವಲ್ಲಭ, ಶ್ರೀವಲ್ಲಭ, ಎಂಬ ಬಿರುದುಗಳಿದ್ದವು. ಇವನಿಗೆ ಧೋರ ಎಂಬ ಹೆಸರೂ ಇತ್ತು. ಇದು ಧ್ರುವ ಎಂಬುದರ ಪಾಕೃತ ರೂಪ. ಇವನಿಗಿಂತ ಮುಂಚೆ ದೊರೆಯಾಗಿದ್ದ ಇವನ ಅಣ್ಣ ಇಮ್ಮಡಿ ಗೋವಿಂದ ವಿಷಯಾಸಕ್ತನಾದ ಫಲವಾಗಿ ರಾಜ್ಯದ ಬಿಗಿ ತಪ್ಪಿತು. ಆದ್ದರಿಂದ ಅವನು ತಮ್ಮನಾದ ಧ್ರುವನಿಗೆ ಆಡಳಿತ ಸೂತ್ರವನ್ನು ವಹಿಸಿಕೊಟ್ಟನೆನ್ನಲಾಗಿದೆ. ಇವನ ಆಳ್ವಿಕೆ ಯಾವಾಗ ಪ್ರಾರಂಭವಾಯಿತೆಂಬುದನ್ನು ಖಚಿತವಾಗಿ ಹೇಳಲು ಆಧಾರಗಳಿಲ್ಲ. ಇವನು ಸು. 780 ರಲ್ಲಿ ಸಿಂಹಾಸನವನ್ನೇರಿದನೆಂದು ಊಹಿಸಲಾಗಿದೆ. ಅತ್ಯಂತ ಪರಾಕ್ರಮಶಾಲಿಯಾದ ಇವನು ರಾಜ್ಯಸೂತ್ರಗಳನ್ನು ವಹಿಸಿಕೊಂಡ ಕೂಡಲೆ ದಿಗ್ವಿಜಯ ಯಾತ್ರೆ ಕೈಗೊಂಡು ತಲಕಾಡಿನ ಗಂಗರಾಜ ಇಮ್ಮಡಿ ಶಿವಮಾರನನ್ನು ಸೋಲಿಸಿ ಸೆರೆಯಲ್ಲಿಟ್ಟು ಗಂಗವಾಡಿಯನ್ನು ಸ್ವಾಧೀನಪಡಿಸಿಕೊಂಡ. ಪಲ್ಲವ ರಾಜನ ಮೇಲೆ ದಾಳಿ ಅಲ್ಲಿಯ ರಾಜನಾದ ನಂದಿವರ್ಮ ಪಲ್ಲವಮಲ್ಲನಿಂದ ಕಪ್ಪವನ್ನು ತೆಗೆದುಕೊಂಡ. ವೇಂಗಿ ರಾಜ್ಯದ ಮೇಲೆ ದಂಡೆತ್ತಿಹೋದ. ಅಲ್ಲಿಯ ದೊರೆ 4 ನೆಯ ವಿಷ್ಣುವರ್ಧನ ಇವನೊಡನೆ ಸಂಧಿ ಮಾಡಿಕೊಂಡು, ತನ್ನ ಮಗಳಾದ ಶೀಲಭಟ್ಟಾರಿಕೆಯನ್ನು ಧ್ರುವನಿಗೆ ಮದುವೆ ಮಾಡಿಕೊಟ್ಟ. ಅನಂತರ ಇವನು ದಂಡೆಯಾತ್ರೆ ಕೈಗೊಂಡು ಗುರ್ಜರ ಪ್ರತೀಹಾರ ಅರಸನಾದ ವತ್ಸರಾಜನನ್ನು ಸೋಲಿಸಿದ. ಗಂಗಾಯಮುನಾ ದೋಆಬ್ ಪ್ರದೇಶದಲ್ಲಿ ಇವನನ್ನು ಎದುರಿಸಿದ ಬಂಗಾಳದ ದೊರೆ ಧರ್ಮಪಾಲನೂ ಸೋತು ತನ್ನ ರಾಜತ್ವದ ಲಾಂಛನಗಳನ್ನು ಕಳೆದುಕೊಂಡ. ಈ ನಾನಾ ದಿಗ್ವಿಜಯಗಳಿಂದ ಧ್ರುವನ ಪ್ರತಾಪವೂ ಪ್ರಭಾವವೂ ಬೆಳೆದುವು. ರಾಷ್ಟ್ರಕೂಟರ ಹಿರಿಮೆಯೂ ವೈಭವವೂ ಹಿಂದೆ ಎಂದು ಇಷ್ಟು ಉಚ್ಚಸ್ಥಾನಕ್ಕೆ ಏರಿರಲಿಲ್ಲ. ಈತ 793ರಲ್ಲಿ ಕಾಲವಾದ. ಇವನಿಗೆ ಕರ್ಕ, ಸ್ತಂಭ (ಕಂಭ) ಗೋವಿಂದ , ಇಂದ್ರ ಎಂಬ ನಾಲ್ವರು ಮಕ್ಕಳಿದ್ದರು. ಕರ್ಕ ಚಿಕ್ಕಂದಿನಲ್ಲೇ ತೀರಿಕೊಂಡ. ಸ್ತಂಭ ಗಂಗವಾಡಿಯನ್ನಾಳುತ್ತಿದ್ದ. ಸಮರ್ಥನಾದ ಗೋವಿಂದನನ್ನು ಧ್ರುವ ತನ್ನ ಉತ್ತರಾಧಿಕಾರಿಯಾಗಿ ಆರಿಸಿದ. ತನ್ನ ಅನಂತರ ಸಿಂಹಾಸನಕ್ಕಾಗಿ ಹೊಡೆದಾಟವಾಗಬಾರದೆಂಬ ಉದ್ದೇಶದಿಂದ ಈತ ಸಿಂಹಾಸನದಿಂದ ಇಳಿದು ಗೋವಿಂದನಿಗೆ ರಾಜ್ಯ ಸೂತ್ರವನ್ನು ವಹಿಸಿಕೊಟ್ಟನೆಂದು ಹೇಳಲಾಗಿದೆ.

9ನೆಯ ಶತಮಾನದಲ್ಲಿ ಮಾನ್ಯಖೇಟದ ರಾಷ್ಟ್ರಕೂಟ ಶಾಖೆಯಲ್ಲಿ ಇಬ್ಬರು ಧ್ರುವರಾಜರಿದ್ದರು. ಇವರಲ್ಲಿ ಮೊದಲನೆಯವನಾದ ಮಹಾಸಾಮಂತಾಧಿಪತಿ ಧಾರಾವರ್ಷ ನಿರುಪಮ ಧ್ರುವರಾಜ 834 - 35 ರಲ್ಲಿ ಖೇಟಮಂಡಲದಲ್ಲಿ (ಈಗಿನ ಕೈರಾ ಜಿಲ್ಲೆ) ಆಳುತ್ತಿದ್ದ. ಇವನು ವಲ್ಲಭ ರಾಜನೊಡನೆ ಯುದ್ಧಮಾಡಿ ಮಡಿದ. ಇವನ ಮೊಮ್ಮಗ ಈ ಶಾಖೆಯ ಎರಡನೆಯ ಧ್ರುವರಾಜ. ಇವನಿಗೂ ಮಹಾ ಸಾಮಂತಾಧಿಪತಿ ಎಂಬ ಪಟ್ಟವೂ ಧಾರಾವರ್ಷ, ನಿರುಪಮ ಎಂಬ ಬಿರುದುಗಳೂ ಇದ್ದುವು. ಇವನು 866 - 67 ರಲ್ಲಿ ಭೃಗು ಕಚ್ಛದಲ್ಲಿ (ಈಗಿನ ಭರೋಚ್) ಇದ್ದನೆಂದು ಇವನ ಶಾಸನವೊಂದರಿಂದ ತಿಳಿಯುತ್ತದೆ. ತನ್ನ ಮೇಲೆ ಬಿದ್ದ ವಲ್ಲಭರಾಜನೊಡನೆ ಇವನು ಹೋರಾಡಿ ಜಯಗಳಿಸಿದನೆಂದೂ ಪ್ರಬಲನಾದ ಮಿಹಿರನೆಂಬ ರಾಜನನ್ನು ಇತರರ ಸಹಾಯವಿಲ್ಲದೆ ಸೋಲಿಸಿದನೆಂದೂ ಈ ಶಾಸನ ಹೇಳುತ್ತದೆ.

ಮೇಲ್ಕಂಡ ನಾಲ್ಕು ಮಂದಿಯಲ್ಲದೆ ಲಿಚ್ಛವಿ ಕುಲದ ಭಟ್ಟಾರಕ ಮಹಾರಾಜ ಧ್ರುವನೆಂಬ ರಾಜ ನೇಪಾಳದಲ್ಲಿ ಇದ್ದನೆಂಬುದು ಕೆಲವು ಶಾಸನಗಳಿಂದ ತಿಳಿದುಬಂದಿದೆ. ಇವನು 7 ನೆಯ ಶತಮಾನದ ಮಧ್ಯದಲ್ಲಿ ಆಳುತ್ತಿದ್ದನೆಂದು ಹೇಳಬಹುದು.
(ಎನ್.ಎಲ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ